ಬ್ರೂನೊ, ಜೊರ್‍ಡಾನೊ
	1548-1600. ಇಟಲಿಯ ತತ್ತ್ವಜ್ಞಾನಿ. ನೊಲಾದಲ್ಲಿ ಜನನ. ಅಕ್ರೊಮಾಟಿಸ್ಮಸ್ ಎಂಬ ಕ್ರಾಂತಿಕಾರಕ ಗ್ರಂಥ ಈತನ ಅಸಾಧಾರಣ ಸ್ವಾತಂತ್ರ್ಯಪ್ರಿಯತೆಯ ದ್ಯೋತಕ. ಆಳರಸರ ವೈರಕ್ಕೆ ತುತ್ತಾಗಿ ಈತ ದೇಶ ಬಿಟ್ಟು ಓಡಿಹೋಗಿ ಯೂರೊಪಿನಲ್ಲೆಲ್ಲ ಪ್ರವಾಸಮಾಡಿದ. 1591ರಲ್ಲಿ ಇಟಲಿಗೆ ಹಿಂದಿರುಗಿದಾಗ ಸಂಪ್ರದಾಯಭ್ರಷ್ಟನೆಂಬ ಆಪಾದನೆಯ ಮೇಲೆ ಈತನನ್ನು ಕಂಬಕ್ಕೆ ಕಟ್ಟಿ ಜೀವಂತ ಸುಡಲಾಯಿತು. ಅರಿಸ್ಟಾಟಲನ ಖಗೋಳ ಸಿದ್ಧಾಂತವನ್ನು ತಿರಸ್ಕರಿಸಿ ಕೊಪರ್ನಿಕಸನ ಹೊಸ ಸಿದ್ಧಾಂತವನ್ನು ಅನುಮೋದಿಸಿದುದೂ ವಿಶ್ವವೇ ದೇವರು ದೇವರೇ ವಿಶ್ವವೆಂಬ ನಂಬಿಕೆಯತ್ತ ಬಲವಿದ್ದದೂ ಈತನ ಪತನಕ್ಕೆ ಕಾರಣವಾದುವು.
(ಎಚ್.ಕೆ.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ